ಫ್ಲೈದುಬೈ ವಿಮಾನದಲ್ಲಿ ಹಲ್ಲೆಗೊಳಗಾದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಆರೋಗ್ಯ ಸ್ಥಿರ: ತಬೂಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ‘ಫ್ಲೈದುಬೈ’ ಫ್ಲೈ ದುಬೈ ವಿಮಾನದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಗಾಯಗೊಂಡಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರ ಆರೋಗ್ಯ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ. ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿದ ಮಾಹಿತಿ ಪ್ರಕಾರ, ಅವರು ವಾಯುವ್ಯ ಸೌದಿ ಅರೇಬಿಯಾದ ತಬೂಕ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸಂಪೂರ್ಣ ವೈದ್ಯಕೀಯ ವರದಿ ಇನ್ನಷ್ಟೇ ಬರಬೇಕಿದೆ.
ವಿಮಾನದ ಕಾಕ್ಪಿಟ್ನಲ್ಲಿ ನಡೆದಿದ್ದಾದರೂ ಏನು?
ಫ್ಲೈದುಬೈನ FZ1073 ವಿಮಾನದ ಕಾಕ್ಪಿಟ್ನಲ್ಲಿ ಸಹ-ಪೈಲಟ್ನಿಂದ ತೀವ್ರ ಹಲ್ಲೆ ನಡೆದ ಪರಿಣಾಮ ಸ್ಮಿತ್ ಮಚ್ಚಾರ್ ಗಾಯಗೊಂಡಿದ್ದರು. ಆದಾಗ್ಯೂ, ಗಂಭೀರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣಕ್ಕೆ ತಿರುಗಿಸಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಸಿಬ್ಬಂದಿ, ಪ್ರಯಾಣಿಕರು ಹಾಗೂ ವಿಮಾನದಲ್ಲಿದ್ದ ಇತರ ತರಬೇತಿ ಪಡೆದ ಪೈಲಟ್ಗಳ ಸಹಕಾರದಿಂದ ನಿಯಂತ್ರಣ ಸಾಧಿಸಲಾಗಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಏರ್ಲೈನ್ಸ್ ಸ್ಪಷ್ಟಪಡಿಸಿದೆ. ಈ ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಉದ್ದೇಶದ ಕುರಿತು ತನಿಖೆ ಮುಂದುವರಿದಿದೆ.
ಸ್ಪಂದಿಸಿದ ಭಾರತೀಯ ರಾಯಭಾರ ಕಚೇರಿ!
ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಹಾಗೂ ರಿಯಾದ್ ರಾಯಭಾರ ಕಚೇರಿಯ ಅಧಿಕಾರಿಗಳು ಮಚ್ಚಾರ್ ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅಲ್ಲದೆ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಸೌದಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯವಿರುವ ಎಲ್ಲಾ ವೈದ್ಯಕೀಯ ಮತ್ತು ರಾಜತಾಂತ್ರಿಕ ನೆರವನ್ನು ನೀಡಲಾಗುತ್ತಿದೆ.
ಸ್ಮಿತ್ ಮಚ್ಚಾರ್ ಅವರು ಈ ಹಿಂದೆ ಭಾರತದ ‘ಸ್ಪೈಸ್ಜೆಟ್’ ಸ್ಪಯ್ವಿಸ್ ಜೆಟ್ ವಿಮಾನ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು. ಜೂನ್ 2022 ರಿಂದ ಅವರು ಫ್ಲೈದುಬೈನ ಬೋಯಿಂಗ್ 737 ವಿಮಾನಗಳಲ್ಲಿ ಕ್ಯಾಪ್ಟನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗಾಯಗೊಂಡಿದ್ದರೂ ಸಮಯಪ್ರಜ್ಞೆ ಮೆರೆದು ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರ ಧೈರ್ಯಕ್ಕೆ ಜಗತ್ತಿನಾದ್ಯಂತ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಘಟನೆಯು ವಿಮಾನಯಾನ ಭದ್ರತೆ ಮತ್ತು ಕಾಕ್ಪಿಟ್ ಸುರಕ್ಷತಾ ನಿಯಮಗಳ ಕುರಿತು ಜಾಗತಿಕ ಮಟ್ಟದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.


